ಈ ವರ್ಷ 4 ಲಕ್ಷ ಮಹಿಳೆಯರಿಗೆ ಉದ್ಯೋಗ
ಬಜೆಟ್ ನಲ್ಲಿ ಘೋಷಣೆ: ಬಸವರಾಜ್ ಬೊಮ್ಮಾಯಿ
ಬೆಂಗಳೂರು: ಮಾ.8; ನಾಲ್ಕು ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡುವ ಘೋಷಣೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಮಾಡಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ಇಂದು ಸಂಜೆ ಶಂಕರಮಠ ಬಡಾವಣೆಯ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬಲೂನುಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಹಿಳಾ ಸಂಘಕ್ಕೆ 1.50 ಲಕ್ಷ ರೂಗಳನ್ನು ಸಹಾಯಧನವನ್ನಾಗಿ ನೀಡಲು ಬಜೆಟ್ ನಲ್ಲಿ ಹೇಳಿದ್ದೇನೆ.ಸ್ವ ಸಹಾಯ ಸಂಘಗಳಿಗೆ ಸಾಲ ನೀಡುವ ಸಲುವಾಗಿ ಆಂಕರ್ ಬ್ಯಾಂಕ್ ಘೋಷಿಸಲಾಗಿದೆ.
ಅಷ್ಟೇ ಅಲ್ಲದೆ ಈ ವರ್ಷ ನಾಲ್ಕು ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
41 ಸಾವಿರದ 18 ಕೋಟಿ ರೂಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ನನ್ಮ ಬಜೆಟ್ ಪ್ರಯೋಜನವನ್ನು ಸರಿಯಾಗಿ ಪಡೆದರೆ ರಾಜ್ಯವನ್ನು ಆರ್ಥಿಕತೆಯ ಸಬಲತೆಯ ಕಡೆಗೆ ಕೊಂಡೊಯ್ಯಬಹುದು ಎಂದರು.
ದುಡ್ಡೆ ದೊಡ್ಡಪ್ಪ ಎಂಬ ಗಾದೆ ಮಾತು ಇಂದು ಬದಲಾಗಿ ದುಡಿಮೆಯೆ ದೊಡ್ಡಪ್ಪ ಎಂಬಂತಾಗಿದೆ.ಇದಕ್ಕಾಗಿ ಮಹಿಳೆಯರ ಮೇಲೆ ಭರವಸೆ ಇಟ್ಟು ಉತ್ತಮ ಬಜೆಟ್ ನೀಡಲಾಗಿದೆ. ಇದರ ಪ್ರಯೋಜನವನ್ನು ಎಲ್ಲ ಮಹಿಳೆಯರು ಪಡೆದುಕೊಂಡು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕರೆ ನೀಡಿದ ಮುಖ್ಯಮಂತ್ರಿಗಳು
ಬಡತನ ರೇಖೆಗಿಂತ ಕೆಳಗಿನ ಮಹಿಳೆಯರ ಅಭ್ಯುದಯಕ್ಕಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಲಿದೆ ಎಂದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ಕೆ.ಗೋಪಾಲಯ್ಯ, ಪ್ರವಾಸೋದ್ಯಮ ಖಾತೆ ಸಚಿವ ಆನಂದ್ ಸಿಂಗ್, ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಚಿತ್ರನಟಿ ತಾರಾ ಅನುರಾಧ, ನೆ.ಲ.ನರೇಂದ್ರ ಬಾಬು ,ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಜಯರಾಮಯ್ಯ, ಹರೀಶ್ ಇತರರು ಉಪಸ್ಥಿತರಿದ್ದರು.