ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸಂಘದ ಧೈಯೋದ್ದೇಶ, ತತ್ವ-ಸಿದ್ಧಾಂತ ಹಾಗೂ ಆದರ್ಶಗಳನ್ನು ಪಾಲಿಸುವವರನ್ನು ಗುರುತಿಸಿ ಮತ ನೀಡುವಂತೆ ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಎ.ಎನ್.ನಟರಾಜ್‌ಗೌಡ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕಗಳ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವವರನ್ನು ಮತದಾರರು ಪರಿಗಣಿಸಬಾರದು. ನಾಡಪ್ರಭು ಕೆಂಪೇಗೌಡರಂತೆ ಜಾತ್ಯತೀತ ಮನೋಭಾವ ಹೊಂದಿರುವವರಿಗೆ ಆದ್ಯತೆ ನೀಡಬೇಕು. ರಾಷ್ಟ್ರಕವಿ ಕುವೆಂಪು ಅವರ ತತ್ವ-ಸಿದ್ಧಾಂತವನ್ನು
ಅಳವಡಿಸಿಕೊಂಡಿರುವವರನ್ನು ಗುರುತಿಸಿ ಮತ ನೀಡಬೇಕೆ೦ದು ಕೋರಿದ್ದಾರೆ.
ನಿಸ್ವಾರ್ಥವಾಗಿ ಸಮುದಾಯದ ಏಳಿಗೆ, ಶಿಕ್ಷಣ, ಆರೋಗ್ಯದ ಕಡೆಗೆ ಒತ್ತು ನೀಡುವವರನ್ನು ಗುರುತಿಸಬೇಕು. ಅತ್ಯಂತ ಕಡಿಮೆ ಶುಲ್ಕ ಅಥವಾ ಉಚಿತವಾಗಿ ಶಾಲೆ, ಆಸ್ಪತ್ರೆಗಳನ್ನು ಎಲ್ಲ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ತೆರೆಯುವವರಿಗೆ ಮನ್ನಣೆ ನೀಡುವಂತೆ ಕೋರಿದ್ದಾರೆ.
ಉಚಿತ ವೃತ್ತಿ ಶಿಕ್ಷಣ, ಕೌಶಲ್ಯ ತರಬೇತಿ, ಉಚಿತ ವಿದ್ಯಾರ್ಥಿ ನಿಲಯ ತೆರೆಯುವವರನ್ನು ಗುರುತಿಸಬೇಕು. ಹಣ-ಆಮಿಷ ಹಾಗೂ ಉಡುಗೊರೆಗಳಿಗೆ ಮಾರುಹೋಗದೆ ಯೋಗ್ಯರನ್ನು ಆಯ್ಕೆ ಮಾಡಬೇಕೆಂದು ಒಕ್ಕಲಿಗ ಸಮುದಾಯದವರಲ್ಲಿ ಅವರು ಮನವಿ ಮಾಡಿದ್ದಾರೆ.