ಬೆಂಗಳೂರು, ಜು. 29: ಬೆಂಗಳೂರು ಹೊರ ವಲಯದಲ್ಲಿ ಅತಿ ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ಸಾವಿರಾರು ಜನರಿಗೆ ಉಂಡೆ ನಾಮ ಹಾಕಿದೆ. ರಾಜಾಜಿನಗರದಲ್ಲಿ ತೆರೆದಿದ್ದ ಕಚೇರಿಯನ್ನು ಕ್ಲೋಸ್ ಮಾಡಿದ್ದು, ಹಣ ಕಳೆದುಕೊಂಡ ಸಾವಿರಾರು ಮಂದಿ ಕಚೇರಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೃಂದಾವನ್ ಪ್ರಾಪರ್ಟಿಸ್ ಮಾಲೀಕ ತಲೆ ಮರೆಸಿಕೊಂಡಿದ್ದಾನೆ. ಹಲವು ತಿಂಗಳಿನಿಂದ ಈ ವಂಚಕ ಕಂಪನಿ ವಿರುದ್ಧ ನೀಡಿದ ದೂರು ದಾಖಲಿಸಿಕೊಳ್ಳಲಾಗದೇ ಪೊಲೀಸರೇ ನಿರ್ಲಕ್ಷ್ಯ ವಹಿಸಿದರೇ? ಅಂತೂ ಬೃಂದಾವನದಲ್ಲಿ ಹೂಡಿಕೆ ಮಾಡಿದವರು ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ಬೋಗಸ್ ದಾಖಲೆ ಕೈಗಿಟ್ಟು ಎಸ್ಕೇಪ್: ರಾಜಾಜಿನಗರದಲ್ಲಿ ಕಾರ್ಪೋರೇಟ್ ಮಾದರಿ ಕಚೇರಿ ತೆರೆದಿದ್ದ ಬೃಂದವನ್ ಪ್ರಾಪರ್ಟಿ ಕೇವಲ ಐದು ಲಕ್ಷ, ಆರು ಲಕ್ಷ ರೂಪಾಯಿಗೆ ಬೆಂಗಳೂರು ವಲಯದಲ್ಲಿನಿವೇಶನ ನೀಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿತ್ತು ಸುಮಾರು ಐದು ವರ್ಷದಿಂದ ಬೃಂದಾವನ್ ಪ್ರಾಪರ್ಟಿ ನಿವೇಶನ ಕೊಡುವ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿತ್ತು.null
ಇದರ ಮಾಲೀಕ ದಿನೇಶ್ ಗೌಡ ಎಂಬಾತ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡು ಹಣ ನಿರ್ವಹಣೆ ಮಾಡುತ್ತಿದ್ದ. ಕಾರ್ಪೋರೇಟ್ ಮಾದರಿ ಕಚೇರಿ ತೆರೆದಿದ್ದ ಬೃಂದಾವನ್ ಪ್ರಾಪರ್ಟಿ ಕಡಿಮೆ ಬೆಲೆಯ ಆಫರ್ ಆಸೆಗೆ ಬಿದ್ದು ಅನೇಕರು ಹೂಡಿಕೆ ಮಾಡಿದ್ದರು. ಕಡಿಮೆ ಬೆಲೆಗೆ ನಿವೇಶನ ಎಂದು ಆಸೆಗೆ ಬಿದ್ದು ಬಹುತೇಕ ಬಡವರು ಹಾಗೂ ಮಧ್ಯಮ ವರ್ಗದವರು ಬೃಂದವನ್ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಿದ್ದರು. ಐವತ್ತು ಸಾವಿರ ರೂ. ನಿಂದ ಹಿಡಿದು ಐವತ್ತು ಲಕ್ಷ ವರೆಗೂ ಹೂಡಿಕೆ ಮಾಡಿದವರು ಇದೀಗ ಬೀದಿಗೆ ಬಿದ್ದಿದ್ದಾರೆ.
ಆರೋಪಿಯ ಬಂಧನಕ್ಕಾಗಿ ಆಗ್ರಹ
ರಾಜಾಜಿನಗರದಲ್ಲಿರುವ ಬೃಂದಾವನ ಪ್ರಾಪರ್ಟಿ ಕಚೇರಿ ಕೆಲ ದಿನಗಳ ಹಿಂದೆ ಬಾಗಿಲು ಮುಚ್ಚಿಕೊಂಡಿದೆ. ಅದರ ಮಾಲೀಕ ದಿನೇಶ್ ಗೌಡ ಮತ್ತು ಏಜೆಂಟರು ಕೂಡ ಪರಾರಿಯಾಗಿದ್ದಾರೆ. ಯಾವಾಗ ಕಚೇರಿ ಖಾಲಿಯಾಗಿದೆ ಎಂಬ ಸತ್ಯ ಹೂಡಿಕೆದಾರರಲ್ಲಿ ಗೊತ್ತಾಯಿತೋ ಗುರುವಾರ ಬೆಳಗ್ಗೆ ಒಂದೇ ದಿನ ಕಚೇರಿ ಮುಂದೆ ಸುಮಾರು ಐನೂರು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ದಿನೇಶ್ ಗೌಡನ ಬಂಧನಕ್ಕಾಗಿ ಆಗ್ರಹಿಸಿ ಘೋಷಣೆ ಕೂಗಿದರು. ಪ್ಲಂಬರ್, ಗಾರೆ ಕೆಲಸ ಮಾಡುವವರು ಅಂತೂ ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂತು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರು ನೀಡುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಮನವಿ ಮೇರೆಗೆ ಸಾರ್ವಜನಿಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡಸುವುದಾಗಿ ಉತ್ತರ ವಿಭಾಗದ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ.
ನಿವೇಶನ ಇಲ್ಲ, ದುಡ್ಡು ಇಲ್ಲ
ಬೃಂದಾವನ್ ಪ್ರಾಪರ್ಟಿ ಜನರಿಂದ ಕಳೆದ ಐದು ವರ್ಷದಿಂದ ಹೂಡಿಕೆ ಮಾಡಿಸಿಕೊಂಡಿದೆ. ಪೂರ್ಣ ಹಣ ಹೂಡಿಕೆ ಮಾಡಿದವರಿಗೆ ವಾಹನ ವ್ಯವಸ್ಥೆ ಮಾಡಿ ನೆಲಮಂಗಲ, ಹೆಸರಘಟ್ಟ, ಮಾಗಡಿ ರಸ್ತೆ ಮತ್ತಿತರ ಕಡೆ ಜಾಗ ತೋರಿಸಿದೆ. ಇದನ್ನೇ ನಂಬಿ ಅನೇಕರು ಹೂಡಿಕೆ ಮಾಡಿದ್ದಾರೆ. ವಾಸ್ತವದಲ್ಲಿ ಹೂಡಿಕೆ ಮಾಡಿದವರಿಗೆ ನಿವೇಶನವೂ ಕೊಟ್ಟಿಲ್ಲ. ಹಣವನ್ನು ವಾಪಸು ನೀಡಿಲ್ಲ. ಬಹುತೇಕ ಬೃಂದಾವನ ಪ್ರಾಪರ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ , ಏಜೆಂಟರು ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ನಾನು ಮತ್ತು ನನ್ನ ಸ್ನೇಹಿತ ಸೇರಿ ಮೂರು ವರ್ಷದ ಹಿಂದೆ ಹನ್ನೆರಡು ಲಕ್ಷ ರೂ. ಹೂಡಿಕೆ ಮಾಡಿದ್ದೆವು. ನಿವೇಶನ ಕೊಡಲಿಲ್ಲ, ದುಡ್ಡು ವಾಪಸು ನೀಡಲಿಲ್ಲ ಎಂದು ಹಣ ಕಳೆದುಕೊಂಡಿರುವ ಆಶಾ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಬೋಗಸ್ ದಾಖಲೆಗಳಲ್ಲಿ ನಿವೇಶನ ನೋಂದಣಿ
ಬೃಂದಾವನ್ ವಂಚನೆ ಆಟ ಅನೇಕ ದಿನಗಳಿಂದ ನಡೆಯುತ್ತಿತ್ತು. ಪ್ರಭಾವ ಇದ್ದವರು ಹೂಡಿಕೆ ಮಾಡಿದ ಹಣ ವಾಪಸು ನೀಡುವಂತೆ ಒತ್ತಡ ಹಾಕಿದಾಗ ಆರು ತಿಂಗಳ ದಿನಾಂಕ ಉಲ್ಲೇಖಿಸಿ ಪೋಸ್ಟ್ ಡೇಟೆಡ್ ಚೆಕ್‌ಗಳನ್ನು ನೀಡಿದ್ದಾರೆ. ಬುಕ್ಕಿಂಗ್ ಅಮೌಂಟ್ ಅಂತ ಲಕ್ಷಾಂತರ ರೂಪಾಯಿ ಪಡೆದು ಉಂಡೆ ನಾಮ ತೀಡಿದ್ದಾರೆ. ತಾವರೆಕೆರೆ ಬಳಿ ನಿವೇಶನ ಕೊಡುವುದಾಗಿ ಹೇಳಿದ್ದರು. ಎರಡು ಲಕ್ಷ ರೂ. ಹಣ ನೀಡಿದ್ದೆವು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ದಾಖಲೆಗಳನ್ನು ನೀಡಿ ಮೋಸ ಮಾಡಿದ್ದರು. ಹಣ ವಾಪಸು ನೀಡುವಂತೆ ಕೇಳಿ ಮೂವತ್ತು ಸಲ ಭೇಟಿ ಮಾಡಿದರೂ ಅದರ ಮಾಲೀಕ ಸಿಗಲೇ ಇಲ್ಲ. ಒಂದು ವಾರ ಬಿಟ್ಟು ಬನ್ನಿ ಎಂದೇ ಮೋಸ ಮಾಡಿದರು ಎಂದು ತುಳಸಿ ಕೃಷ್ಣ ಎಂಬುವರು ತನಗಾದ ಅನುಭವ ಹಂಚಿಕೊಂಡಿದ್ದಾರೆ.
ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆ
ಬೃಂದಾವನ ಪ್ರಾಪರ್ಟಿಸ್ ವಂಚನೆ ಬಗ್ಗೆ ಈಗಾಗಲೇ ಅನೇಕರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ನಾನಾ ಸಬೂಬು ಹೇಳಿ ವಾಪಸು ಕಳಿಸಿದ್ದಾರೆ. ಹೀಗಾಗಿ ಕೆಲವರು ಬೃಂದಾವನ ಪ್ರಾಪರ್ಟಿ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ. ಕಂಪನಿ ಮಾಲೀಕ ದಿನೇಶ್ ಗೌಡ ನಾಪತ್ತೆಯಾಗಿದ್ದಾನೆ. ಎಲ್ಲಾ ಸಿಬ್ಬಂದಿ ನಾಪತ್ತೆಯಾಗಿದ್ದು ಸುಮಾರು ನಾನೂರು ರಿಂದ 500 ಕೋಟಿ ರೂ. ವಂಚನೆ ಮಾಡಿರುವ ಸಾಧ್ಯತೆಯಿದೆ ಎಂದು ಮೋಸಕ್ಕೆ ಹೋದ ಮೂರ್ತಿ ಎಂಬುವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಕೊಳ್ಳೆ ಹೊಡೆದ ಮೇಲೆ ಕೋಟೆಗೆ ಬಾಗಿಲು ಹಾಕಿದಂತೆ ಇದೀಗ ಬೃಂದಾವನ್ ಪ್ರಾಪರ್ಟಿ ಮಾಲೀಕ ಪರಾರಿಯಾದ ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಸಿಐಡಿ ತನಿಖೆಗೆ ವಹಿಸುವ ಸಾಧ್ಯತೆಯಿದೆ.