National News Analysis

3 November 2024, 18:38 PM

ರಾಗಿ ಲಕ್ಷ್ಮಣಯ್ಯ

ಜಗತ್ತಿನ ಶ್ರೇಷ್ಠ ಆಹಾರದ ಸಾಲಿನಲ್ಲಿ ನಿಲ್ಲುವಂತಹ ಧಾನ್ಯ ರಾಗಿ. ಅಂತ ಧಾನ್ಯದ ಉತ್ಕೃಷ್ಟ ತಳಿಗಳ ಜನಕ ರಾಗಿಲಕ್ಷ್ಮಣಯ್ಯ ಅವರ ಶತಮಾನೋತ್ಸವದ ಸಂದರ್ಭ ಇದು. ಜಗತ್ತಿನ ಬಹುತೇಕ ಶ್ರಮಸಮುದಾಯಗಳ ಬಹುಮುಖ್ಯ ಆಹಾರ ರಾಗಿಗೆ ಹೊಸ ಪ್ರಪಂಚವನ್ನೇ ತೆರೆದು ತೋರಿದವರು ಅವರು. ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಸಾಧನೆಗೈದ ಈ ರಾಗಿ ಸಂತನ ಹೆಸರು ರಾಗಿ ಪ್ರಪಂಚದಲ್ಲಿ ಅಮರವಾಗಿರಲಿದೆ… ದಕ್ಷಿಣ ಭಾರತ ಹಾಗೂ ಮಧ್ಯ ಈಶಾನ್ಯ ಭಾರತದ ಬಯಲುಸೀಮೆಯ ಪ್ರಧಾನ ಬೆಳೆ ರಾಗಿ. ಕನಕದಾಸರ ‘ರಾಮಧಾನ್ಯ ಚರಿತೆ’ಯೂ ಸೇರಿದಂತೆ ಹಲವೆಡೆ ರಾಗಿಯ ಬಗ್ಗೆ ಅನೇಕ ಐತಿಹ್ಯಗಳಿವೆ. ‘ಹೊಟ್ಟೆತುಂಬ ಹಿಟ್ಟು ಬಾಯ್ತುಂಬ ಅನ್ನ’ ಎಂಬ ಗಾದೆ ಮಾತಿನಂತೆ, ಬಹುಸಂಖ್ಯಾತ ಶ್ರಮಿಕರ ತೋಳು ತೊಡೆಗಳ ಶಕ್ತಿಯ ಎದೆಗುಂಡಿಗೆಗಳ ಪ್ರಧಾನ ಆಹಾರ ರಾಗಿಯೇ ಆಗಿದೆ. ರಾಗಿ ಬಳಕೆಯ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ಅದರ ಸ್ಟಾರ್‌ ವ್ಯಾಲ್ಯೂ ಕೂಡ ಹೆಚ್ಚಾಗುತ್ತಿದೆ. ವಿಶ್ವದ ತಳಿತಜ್ಞರ ಅಧ್ಯಯನದ ಪ್ರಕಾರ, ಇಂಡಿಯಾ-ಆಫ್ರಿಕಾ ದೇಶಗಳೇ ರಾಗಿಯ ಮೂಲ. ಪ್ರಮುಖವಾಗಿ ಇಂಡಿಯಾವೇ ರಾಗಿಯ ತವರೂರು ಎಂಬುದಕ್ಕೆ ಹಲವಾರು ಗುರುತರ ಪುರಾವೆಗಳಿವೆ. ಕೊಟ್ಟಿಗೆಯ ಗೊಬ್ಬರದಲ್ಲಿ ಬೆಳೆಯುತ್ತಿದ್ದ ಸಾಂಪ್ರದಾಯಿಕ ರಾಗಿಯ ಬಿಳೆಕುಳ್ಳ, ಕರೆಚವಲ ಎಂಬ ಹಳೆಯ ತಳಿಗಳು ಎಕರೆಗೆ ಕೊಟ್ಟಣ, ಏರು ಲೆಕ್ಕದಲ್ಲಿ ಬಿತ್ತನೆ ಬೆಳೆಯಾಗಿದ್ದವು. ನಂತರ ಕಾರ್‍ರಾಗಿ ಎಂಬುದು ಚಲನೆಗೆ ಬಂತು. ಬರುಬರುತ್ತ ದನದ ಗೊಬ್ಬರದ ಜೊತೆಗೆ, ಸೀಮೆಗೊಬ್ಬರ ಹಾಕಿ, ಹೊಸ ತಳಿಯ ಬಗೆಬಗೆಯ ಇಂಡಾಫ್ ರಾಗಿಗಳು ಚಾಲನೆಗೆ ಬಂದವು. ರಾಗಿ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಹೆಚ್ಚುತ್ತಾ ಹೋಯಿತು. ಇಂತಹ ಇಂಡಾಫ್ ರಾಗಿಯ ಹಲವು ತಳಿಗಳನ್ನು ಕಂಡುಹಿಡಿದ ಸಂಶೋಧಕ ಮಾತ್ರ ಜನಸಮುದಾಯಕ್ಕೆ ಸರಿಯಾಗಿ ಗೊತ್ತೇ ಆಗಲಿಲ್ಲ. ಎಲೆಮರೆಕಾಯಿಯಂತೆ, ತಮ್ಮ ಸರಳ, ಸಂತ ವ್ಯಕ್ತಿತ್ವ ಮತ್ತು ಪ್ರವೃತ್ತಿಯಿಂದ ರಾಗಿಯನ್ನೇ ಹಾಸಿಹೊದ್ದು, ಅದನ್ನೇ ಉಸಿರಾಗಿಸಿಕೊಂಡು ರಾಗಿಭೀಷ್ಮನಾಗಿ, ರಾಗಿವಿಜ್ಞಾನಿಯಾಗಿ, ರಾಗಿಪ್ರಪಂಚದ ದಂತಕಥೆಯಾದ ಆ ವ್ಯಕ್ತಿಯೇ ರಾಗಿ ತಳಿಯ ಮಹಾನ್ ಸಂಶೋಧಕ ರಾಗಿಲಕ್ಷ್ಮಣಯ್ಯ. ಲಕ್ಷ್ಮಣಯ್ಯ ಅವರು, ಮೈಸೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ 1921ರ ಮೇ 15ರಂದು ದಲಿತ ರೈತ ಕುಟುಂಬದಲ್ಲಿ ಜನಿಸಿದರು. ತಾಯಿ ಚನ್ನಮ್ಮ. ತಂದೆ ಚಲುವಯ್ಯ. ಹೊಲವನ್ನೇ ಉತ್ತು ಹಾಸಿಹೊದ್ದು ಉಣ್ಣುವ ರೈತ ಕುಟುಂಬ ಇವರದು. ಲಕ್ಷ್ಮಣಯ್ಯ ಅವರು ತಮ್ಮ ಹುಟ್ಟೂರು ಹಾರೋಹಳ್ಳಿಯಲ್ಲಿ ಮರಳ ಮೇಲೆ ಅಕ್ಷರ ತಿದ್ದುವ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿದರು. ನಂತರ ಮೈಸೂರಿನ ಉಚಿತ ವಸತಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಚರಕದಿಂದ ನೂಲುವುದನ್ನು ಕಲಿತರು. ಹಾಸನ ಸರ್ಕಾರಿ ಪ್ರೌಢಶಾಲೆಯನ್ನು ಸೇರಿ ತಮ್ಮ ಪ್ರೌಢಶಿಕ್ಷಣವನ್ನು ಮುಗಿಸಿದರು. ಆಗ ಎಚ್.ವೈ.ಶಾರದಾಪ್ರಸಾದ್ ಅವರು ಇವರ ಸಹಪಾಠಿಯಾಗಿದ್ದರು. ಆನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ವ್ಯಾಸಂಗ ಮಾಡಿದರು. ಅಲ್ಲಿ ಕುವೆಂಪು, ಎಸ್.ವಿ.ಪರಮೇಶ್ವರಭಟ್ಟ ಅವರು ಇವರ ಗುರುಗಳಾಗಿದ್ದರು. ಓದುವುದರಲ್ಲಿ ಮುಂದಿದ್ದ ಮೌನಸಂವೇದನೆಯ ಲಕ್ಷ್ಮಣಯ್ಯ ಅವರು ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಧಾನವಾದ ವಿಷಯದಲ್ಲಿ ಅಧ್ಯಯನ ಮಾಡಿ ಬಿ.ಎಸ್ಸಿ ಪದವೀಧರರಾದರು. ಎಂ.ಎಸ್ಸಿ ಮಾಡುವ ಉತ್ಸಾಹ, ಅವಕಾಶ ಇತ್ತಾದರೂ ಮನೆಯ ಆರ್ಥಿಕ ಸ್ಥಿತಿಗನುಗುಣವಾಗಿ 1942ರಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಆದರೆ ತಮ್ಮ ಪ್ರವೃತ್ತಿಗೆ ಒಗ್ಗದ ಆ ವೃತ್ತಿಗೆ ರಾಜೀನಾಮೆ ನೀಡಿದರು. ಅಷ್ಟೊತ್ತಿಗಾಗಲೇ ಲಕ್ಷ್ಮಣಯ್ಯ ಅವರ ಎದೆಯ ಗೂಡೊಳಗೆ ರಾಗಿ ಕಾಳುಗಳು ಹರಳುಗಟ್ಟುತ್ತಿದ್ದವು. 1945ರಲ್ಲಿ ಲಕ್ಷ್ಮಮ್ಮ ಅವರೊಂದಿಗೆ ವಿವಾಹವಾದರು. ರಾಗಿ ಕುಟುಂಬದ ಮೋಹದ ಕಡೆ ಮುಖ ಮಾಡುತ್ತಿರುವಾಗಲೇ ರಾಜ್ಯ ಕೃಷಿ ಇಲಾಖೆಯ ವ್ಯವಸ್ಥಾಪಕ ಹುದ್ದೆ ಬೀರೂರಿನಲ್ಲಿ ದೊರೆಯಿತು. ಆ ವರ್ಷವೇ ಮಂಡ್ಯದ ವಿ.ಸಿ ಫಾರಂಗೆ ಕಿರಿಯ ಸಹಾಯಕ ವಿಜ್ಞಾನಿಯಾಗಿ ವರ್ಗಾವಣೆಯೂ ಆಯಿತು. ಹುಚ್ಚು ಅನ್ನುವಷ್ಟು ರಾಗಿ ತಳಿ ಪ್ರೇಮವಿಟ್ಟುಕೊಂಡಿದ್ದ ಲಕ್ಷ್ಮಣಯ್ಯ ಅವರು, ತಪಸ್ಸಿನಂತೆ ರಾಗಿ ತಳಿಗಳ ಬಗ್ಗೆ ಅಧ್ಯಯನದಲ್ಲಿ ನಿರತರಾದರು. ಅವರ ಧ್ಯಾನಸ್ಥ ತಲ್ಲೀನತೆಯ ಸಂಶೋಧನೆಯ ಫಲವೇ ‘ಅರುಣ’, ‘ಉದಯ’, ‘ಪೂರ್ಣ’, ‘ಅನ್ನಪೂರ್ಣ’, ‘ಕಾವೇರಿ’ ಎಂಬ ವಿವಿಧ ರಾಗಿ ತಳಿಗಳು. ಕಿರಿಯ ಸಹಾಯಕ ವಿಜ್ಞಾನಿಯಾಗಿದ್ದ ಲಕ್ಷ್ಮಣಯ್ಯ ಅವರು ತಮ್ಮ ತೀವ್ರಾಸಕ್ತಿ, ಗಾಢವಾದ ಶ್ರದ್ಧೆ, ಅಪರಿಮಿತ ಶ್ರಮದಿಂದ ಏಕವ್ಯಕ್ತಿ ಸೇನಾನಿಯಾಗಿ ಮಾಡಿದ್ದ ಕೆಲಸದ ಬಗ್ಗೆ ಅಂಜುತ್ತಲೇ ತಮ್ಮ ಹಿರಿಯ ವಿಜ್ಞಾನಿಗಳ ಗಮನಕ್ಕೆ ತಂದರು. ಕೆಲವರು ಅಸಹನೆಯಿಂದ ಅಸಡ್ಡೆ ತೋರಿದರು, ಕುಹಕವಾಡಿದರು. ಆದರೆ, ಧೃತಿಗೆಡದ ಲಕ್ಷ್ಮಣಯ್ಯನವರು ರಾಗಿ ಪ್ರಪಂಚದಲ್ಲಿಯೇ ದಿಟ್ಟ ಹೆಜ್ಜೆ ಇಡುತ್ತ ಸಾಗಿದರು. ಮುಂದೆ ಕೃಷಿ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗುವ ಅವಕಾಶವಿದ್ದರೂ ಲಕ್ಷ್ಮಣಯ್ಯನವರು ಆಯ್ದುಕೊಂಡಿದ್ದು ರಾಗಿ ತಳಿ ಸಂಶೋಧನೆಗೆ ಅನುಕೂಲವಾದ ಕೃಷಿ ವಿಶ್ವವಿದ್ಯಾಲಯದ ಉದ್ಯೋಗವನ್ನೇ. ಹಳ್ಳಿಹಳ್ಳಿಗಳನ್ನು ಸುತ್ತುತ್ತ ಹಳೆಯ ರಾಗಿ ತಳಿಗಳನ್ನು ಸಂಗ್ರಹಿಸುತ್ತ, ತಮ್ಮ ರಾಗಿಪ್ರಪಂಚದಲ್ಲಿ ತನ್ಮಯರಾಗಿ ಅಧ್ಯಯನ ನಿರತರಾದರು. ಲಕ್ಷ್ಮಣಯ್ಯ ಅವರಿಗೆ ಅರ್ಹತೆ ಆಧಾರದ ಮೇಲೆ ಗೆಜೆಟೆಡ್ ಅಧಿಕಾರಿ ಹುದ್ದೆಗೆ ಪ್ರಮೋಷನ್ ನೀಡಿ, ಹುದ್ದೆ ಲಭ್ಯವಿದ್ದ ಕಾಳುಮೆಣಸು ವಿಭಾಗಕ್ಕೆ ಹಾಕಿದರೆ, ‘ಪ್ರಮೋಷನ್ ಕೊಟ್ಟರೆ ರಾಗಿ ಸಂಶೋಧನೆಯಲ್ಲೇ ಕೊಡಿ. ಅದೇ ನನ್ನ ಉಸಿರು. ಇಲ್ಲವಾದರೆ ಬಡ್ತಿಯೇ ಬೇಡ’ ಎಂದಿದ್ದರು! ಲಕ್ಷ್ಮಣಯ್ಯನವರ ಪ್ರತಿಭೆಯಿಂದ ಕೃಷಿಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ಸಿಗುತ್ತದೆ ಎಂದು ಬಲ್ಲ ಕೃಷಿ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳಾಗಿದ್ದ ಡಾ.ಮಲ್ಲೇರಾಜೇಅರಸು ಅವರು, ಅವರಿಗೆ ಇಂಗ್ಲೆಂಡಿನಲ್ಲಿ ಫೆಲೋಷಿಪ್ ಸಿಗುವಂತೆ ಮಾಡಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ್ದರು. ಆಗ ಲಕ್ಷ್ಮಣಯ್ಯ ಅವರು, ‘ಅದು ಕೋಲ್ಡ್ ಕಂಟ್ರಿ ಸರ್. ಇಂಗ್ಲೆಂಡಿನಲ್ಲಿ ರಾಗಿ ಬೆಳೆ ಬೆಳೆಯುವುದಕ್ಕೆ ಆಗುವುದಿಲ್ಲ. ನನಗೆ ಡಿಗ್ರಿ, ಶಿಷ್ಯವೇತನ ಏನೂ ಬೇಡ’ ಎಂದು ವಿನಯದಿಂದಲೇ ತಿರಸ್ಕರಿಸಿದ್ದರು. ಅಲ್ಲದೆ ಇಂಟರ್‌ಮೀಡಿಯಟ್ ಓದುವಾಗ ತಮ್ಮ ಜೊತೆಗಾರರಾಗಿದ್ದ, ಆಗಿನ ಕೃಷಿಮಂತ್ರಿ ಬಿ.ರಾಚಯ್ಯನವರನ್ನು ಖುದ್ದು ಭೇಟಿ ಮಾಡಿ, ‘ನಾನು ಇಂಗ್ಲೆಂಡಿಗೆ ಹೋಗುವುದಿಲ್ಲ. ನನ್ನ ಉಸಿರಿರುವತನಕ ರಾಗಿ ಕ್ಷೇತ್ರದಲ್ಲಿಯೇ ಮುಂದುವರಿಯಲು ಅವಕಾಶ ಕೊಡಿ’ ಎಂದು ಕೇಳಿಕೊಂಡಿದ್ದರು. ಅಮೆರಿಕದ ರಾಕ್‌ಫೆಲ್ಲರ್ ಸಂಸ್ಥೆಯು ಪ್ರಪಂಚದ ವಿವಿಧ ದೇಶಗಳಲ್ಲಿ ದೇಸಿ ತಳಿಗಳನ್ನು ಸಂಗ್ರಹಿಸಿ ಸಂಶೋಧನೆ ನಡೆಸಲು ಕಾರ್ಯಯೋಜನೆಯೊಂದನ್ನು ರೂಪಿಸಿತ್ತು. ಅದರ ಭಾಗವಾಗಿ ಆಫ್ರಿಕಾದಿಂದ ರಾಗಿಯ 900 ತಳಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸಲು ಕುಲಪತಿ ಕೆ.ಸಿ.ನಾಯಕ್ ಅವರನ್ನು ಸಂಪರ್ಕಿಸಿತ್ತು. ಹಿರಿಯರಾಗಿ ರಾಗಿ ತಳಿತಜ್ಞ ಮಲ್ಲಣ್ಣ ಅವರಿದ್ದರೂ ಹುದ್ದೆಯಲ್ಲಿ ಕಿರಿಯ ಸಸ್ಯ ವಿಜ್ಞಾನಿಯಾಗಿದ್ದ ಲಕ್ಷ್ಮಣಯ್ಯ ಅವರ ಹೆಸರಿಗೆ ಆ ತಳಿಗಳು ಬರುವಂತೆ ಕುಲಪತಿಯವರು ವ್ಯವಸ್ಥೆ ಮಾಡಿದ್ದರು. ಅಮೆರಿಕದಿಂದ ಜಾಯಿಕಾಯಿ ಪೆಟ್ಟಿಗೆಯಲ್ಲಿ ಬಂದ ಆ ತಳಿಗಳನ್ನು ದೇವರಿಗೆ ಸಮಾನವೆಂದು ಪರಿಗಣಿಸಿದ ಲಕ್ಷ್ಮಣಯ್ಯ ಅವರು, ಮಂಡ್ಯ ವಿ.ಸಿ.ಫಾರಂನಲ್ಲಿ ಹಗಲು ರಾತ್ರಿ ಎನ್ನದೆ ಕೈಯ್ಯಾರೆ, ಮನಸಾರೆ ತೀವ್ರವಾಗಿ ಹಚ್ಚಿಕೊಂಡು ಎಲ್ಲವನ್ನೂ ವಿಂಗಡಿಸಿಕೊಂಡು, ತಲ್ಲೀನರಾಗಿ ತಳಿ ಕಟ್ಟುತ್ತಾ ಜೋಪಾನ ಮಾಡಿದರು. ‘ಚೆಂದುಳ್ಳಿ ಹೆಣ್ಣಿಗೆ ಒಡವ್ಯಾಕೆ ಹೊಸರಾಗಿ ಹಿಟ್ಟೀಗೆ ಹೆಸರ‍್ಯಾಕೆ’ ಎಂಬ ಜಾನಪದ ಲೋಕದ ಮಾತಿನ ಮೂಲಕ ಸಾಂಸ್ಕೃತಿಕ ಅನನ್ಯತೆಯನ್ನು ಪಡೆದಿರುವ, ವೈಜ್ಞಾನಿಕವಾಗಿ ಅಕ್ಕಿಗಿಂತ ಹತ್ತಾರುಪಟ್ಟು ಪ್ರೋಟೀನ್, ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ, ಸೋಡಿಯಂ ಖನಿಜಗಳನ್ನು ಒಳಗೊಂಡಿರುವ, ಪ್ರಪಂಚದ ಮಿಲೆಟ್ ಗುಂಪಿನ ಬೆಳೆಗಳಲ್ಲಿ ಜೋಳ ಮತ್ತು ಸಜ್ಜೆಯ ನಂತರದ ಸ್ಥಾನ ಗಳಿಸಿರುವ ರಾಗಿಯನ್ನು ಇಡೀ ಪ್ರಪಂಚದಲ್ಲಿ ಲಕ್ಷ್ಮಣಯ್ಯನವರಷ್ಟು ಹಚ್ಚಿಕೊಂಡವರಿಲ್ಲ. ಋತುಮಾನಗಳಿಗೆ ಅನುಗುಣವಾದ, ವಾಯುಮಾನಗುಣಕ್ಕೆ ಅನುಗುಣವಾದ ತಳಿಗಳನ್ನು ಲಕ್ಷ್ಮಣಯ್ಯನವರು ಕಂಡು ಹಿಡಿದರು. ತಾವು ನಿವೃತ್ತಿಯಾಗುವವರೆಗೆ ಆಫ್ರಿಕಾ ಮತ್ತು ಇಂಡಿಯಾದ ರಾಗಿಗಳಲ್ಲಿ ಆನುವಂಶಿಕವಾಗಿ ಅಂತರವಿರುವುದನ್ನು ಹೆಜ್ಜೆಹೆಜ್ಜೆಗೂ ಗಾಢವಾಗಿ ಅಧ್ಯಯನ ಮಾಡಿ, ಇಂಡಿಯಾ ಮತ್ತು ಆಫ್ರಿಕಾದ ತಳಿಗಳನ್ನು ಬೆಸೆದು ಸಮ್ಮಿಲನಗೊಳಿಸಿ, ಸಂಕರಗೊಳಿಸಿ ಅಪಾರ ಶ್ರಮದಿಂದ ಕೆಂಪುರಾಗಿ, ಕಪ್ಪುರಾಗಿ ತಳಿಗಳನ್ನು ಸಹ ಕಂಡುಹಿಡಿದರು. ಇಂಡಿಯಾ-ಆಫ್ರಿಕಾ ಈ ಎರಡು ದೇಶಗಳಿಗೂ ನ್ಯಾಯಯುತವಾಗಿ ಸಲ್ಲಬೇಕಾಗಿರುವುದನ್ನು ಚಿಂತಿಸಿ ‘ಇಂಡಾಫ್’ ಎಂದು ಹ್ರಸ್ವಗೊಳಿಸಿ, ಆ ತಳಿಗಳಿಗೆ ‘ಇಂಡಾಫ್’ ರಾಗಿ ಎಂದು ಹೆಸರಿಸಿದರು. ಈ ತಳಿಗಳು ರಾಗಿ ಪ್ರಪಂಚದಲ್ಲಿ ಅಚ್ಚಳಿಯದೆ ಉಳಿದು ರಾಗಿ ಕ್ರಾಂತಿಗೆ ಕಾರಣವಾದವು. ಪ್ರಪಂಚದ ರೈತಾಪಿಲೋಕಕ್ಕಂತೂ ಈ ರಾಗಿ ತಳಿಗಳು ಸಂಜೀವಿನಿಯಾಗಿ ಕಂಡವು. ಲಕ್ಷ್ಮಣಯ್ಯನವರು ತಾವು ಕಂಡು ಹಿಡಿದ ಈ ರಾಗಿ ತಳಿಗಳಿಗನುಗುಣವಾಗಿ ಇಂಡಾಫ್-1, 2, 3, 4, 5, 6, 7,  8, ಹೀಗೆ ಹೆಸರಿಡುತ್ತ ಹೋದರು. ಉತ್ತಮ ನೀರಾವರಿಯಲ್ಲಿ ಇಂಡಾಫ್-5 ಎಕರೆಗೆ 65 ಕ್ವಿಂಟಲ್ ಬೆಳೆದು ದಾಖಲೆಯನ್ನು ನಿರ್ಮಿಸಿತು. ಪಕ್ಕಾ ಗಾಂಧಿವಾದಿಯಾಗಿದ್ದ ಲಕ್ಷ್ಮಣಯ್ಯನವರು ಬಿರುದುಬಾವಲಿಗಳಿಗೆ ಹಾತೊರೆಯುವ ಪ್ರವೃತ್ತಿಯವರಾಗಿರಲಿಲ್ಲ. ಎರಡು ಸಲ ಕರ್ನಾಟಕ ಸರ್ಕಾರವು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ. ತನ್ನ ಆವರಣದಲ್ಲಿ ಲಕ್ಷ್ಮಣಯ್ಯನವರ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಆಗಿನ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಘಟಿಕೋತ್ಸವಕ್ಕೆ ಆಹ್ವಾನಿಸಲು ಹೋಗಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿ ವರ್ಗದವರು, ವಿಶ್ವವಿದ್ಯಾಲಯದ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುತ್ತಿದ್ದರಂತೆ, ಕಲಾಂ ಸಾಹೇಬರು ತಕ್ಷಣಕ್ಕೆ ಏನೂ ಪ್ರತಿಕ್ರಿಯೆ ನೀಡದೆ, ಇಂಟರ್‌ನೆಟ್ ನೋಡಿ, ‘ಏನ್ರೀ ನಿಮ್ಮ ಯೂನಿವರ್ಸಿಟಿ ಇಂಡಿಯಾದ ಎರಡನೇ ಹೆಸರಾಂತ ಯೂನಿವರ್ಸಿಟಿ ಅಂತೀರಿ, ವೆಬ್‍ಸೈಟ್ ಅಪ್‌ಡೇಟ್‌ ಆಗಿಲ್ಲ; ರಾಗಿಲಕ್ಷ್ಮಣಯ್ಯನವರ ಫೋಟೊ ಇಲ್ಲ. ಮೊದಲು ಹೋಗಿ ಸರಿ ಮಾಡಿಕೊಂಡು ಬನ್ನಿ’ ಎಂದು ಹೇಳಿ ಕಳುಹಿಸಿದ್ದರಂತೆ. ಸನ್ಮಾನಗಳಿಗೆ ಕೊರಳೊಡ್ಡುವುದರಿಂದ ಎಂದೂ ಗಾವುದ ದೂರವಿದ್ದ ಪಿ.ಲಂಕೇಶ್ ಅವರು, ಅಪರೂಪಕ್ಕೆ 1988ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ವತಿಯಿಂದ ರಾಗಿಲಕ್ಷ್ಮಣಯ್ಯನವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದಾಗ ಆ ಸಮಾರಂಭದಲ್ಲಿ ಭಾಗಿಯಾಗಿ, ಅವರ ಸಾಧನೆಯ ಬಗ್ಗೆ ಮೆಚ್ಚಿ ಮಾತನಾಡಿರುವುದು ಬಹು ಹೆಮ್ಮೆಯ ಸಂದರ್ಭವೇ ಆಗಿದೆ. ರಾಗಿ ತಳಿ ವಿಜ್ಞಾನವನ್ನು ಒಂದು ಕಲೆಯಾಗಿ ಅನುಭವಿಸಿ, ರಾಗಿಯ ನರನಾಡಿಗಳನ್ನು, ಹೃದಯಬಡಿತವನ್ನು ಅದರ ಕರುಳಾಗಿ ಮಿಡಿದು ಪ್ರೀತಿ ಸ್ಪರ್ಶದಿಂದ,  ಸಂಶೋಧನೆ ನಡೆಸಿದ ರಾಗಿ ಕರ್ಮಯೋಗಿ ಲಕ್ಷ್ಮಣಯ್ಯನವರು 1993ರ ಮೇ 14ರಂದು ರಾಗಿ ಪ್ರಪಂಚದಿಂದ ಶಾಶ್ವತವಾಗಿ ಕಣ್ಮರೆಯಾದರು. ‘ನನ್ನ ದೇಹವನ್ನು ಊಳುವಾಗ ಎದೆಯ ಮೇಲೆ ಹಿಡಿ ತುಂಬ ರಾಗಿಯನ್ನಿರಿಸಿ ಮಣ್ಣು ಮುಚ್ಚಿಬಿಡಿ’ ಎನ್ನುವುದು ಅವರ ಕೊನೆಯ ಆಸೆ. ಅವರದು ಎಂಥಾ ರಾಗಿ ಮೋಹ, ಎಂಥಾ ರಾಗಿ ಕರುಳು ಎನ್ನುವುದು ಇದರಿಂದ ಗೊತ್ತಾಗುತ್ತದೆ. ಪ್ರಪಂಚದ ಕೃಷಿಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಮಹನೀಯರಿದ್ದಾರೆ. ಆದರೆ ಅವರ್‍ಯಾರೂ ಒಂದು ಧಾನ್ಯದ ಹೆಸರಿನಲ್ಲಿ ಹೆಸರಾದವರಲ್ಲ. ಮುಗ್ಧತೆಯ ರೂಪಕದಂತಿದ್ದ ರಾಗಿಲಕ್ಷ್ಮಣಯ್ಯ ಅವರಿಗೆ ಆ ಒಂದು ಅಪರೂಪದ ಖ್ಯಾತಿ ಸಿಕ್ಕಿರುವುದು ಪ್ರಕೃತಿ ದ್ಯೋತಕವೇ ಆಗಿದೆ.

Vinkmag ad

Read Previous

ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ವಿಗಳಲ್ಲಿ ಈ ಅಡ್ಡಪರಿಣಾಮಗಳು ಸಾಮಾನ್ಯ

Read Next

DRDO’s 2DG medicine to treat Covid-19: Availability, dosage, price

Leave a Reply

Your email address will not be published. Required fields are marked *

eighteen − five =

Most Popular