ಟಿಎಂಸಿ ಏಕೆ ಇಷ್ಟು ದೊಡ್ಡದಾಗಿ ಗೆದ್ದಿದೆ ಎಂದು ಹೇಳುವುದು ತುಂಬಾ ಕಷ್ಟ. ಆದರೆ, ಬಂಗಾಳದ ಜನ ಮಮತಾ ಬ್ಯಾನರ್ಜಿ ಅವರನ್ನು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ನವ ದೆಹಲಿ (ಮೇ 02); ಪಶ್ಚಿಮ ಬಂಗಾಳ ಚುನಾವಣೆಯನ್ನು ಬಿಜೆಪಿ ನಾಯಕರು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದರು. ಇದೇ ಕಾರಣಕ್ಕೆ ಕೇಂದ್ರದ ನಾಯಕರು ಸಚಿವರು ಬಂಗಾಳಕ್ಕೆ ಆಗಮಿಸಿ ದೊಡ್ಡ ದೊಡ್ಡ ಚುನಾವಣಾ ಪ್ರಚಾರಗಳನ್ನು ನಡೆಸಿದ್ದರು. ಆದರೆ, ಕೇಂದ್ರ ಸಚಿವರು ಬಂದು ಚುನಾವಣೆ ನಡೆಸಿದಾಕ್ಷಣ ಗೆಲುವು ದಕ್ಕುವುದಿಲ್ಲ. ಆ ಸತ್ಯವನ್ನು ಬಂಗಾಳದ ಜನ ಸ್ಪಷ್ಟವಾಗಿ ನಿರೂಪಿಸಿದ್ದಾರೆ ಎಂದು ರಾಜಕೀಯ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಕಳೆದ ಒಂದು ತಿಂಗಳ ಅವಧಿಯಲ್ಲಿ 8 ಹಂತದಲ್ಲಿ ಚುನಾವಣೆ ನಡೆಸಲಾಗಿತ್ತು. ಇಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಟಿಎಂ ಜಯಭೇರಿ ಸಾಧಿಸಿದೆ. ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದರೆ, ಬಿಜೆಪಿ ಮೂರಂಕಿ ಗಡಿ ದಾಟದೆ ತೀವ್ರ ಮುಖಭಂಗ ಅನುಭವಿಸಿದೆ. ಈ ಫಲಿತಾಂಶ ಬಿಜೆಪಿ ಪಾಳಯದಲ್ಲಿ ದೊಡ್ಡ ನಿರಾಸೆಯೊಂದನ್ನು ಮೂಡಿಸಿರುವುದು ಸುಳ್ಳಲ್ಲ.
ಈ ಫಲಿತಾಂಶದ ಬೆನ್ನಿಗೆ ಇಂದು ಸಿಎನ್ಎನ್ ನ್ಯೂಸ್ 18 ಜೊತೆ ಮಾತನಾಡಿರುವ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್, “ಕೇಂದ್ರ ಮಂತ್ರಿಗಳು ಬಂದು ಪ್ರಚಾರ ನಡೆಸಿದಾಕ್ಷಣ ಗೆಲುವು ಖಾತರಿಯಾಗುವುದಿಲ್ಲ. ಬಿಜೆಪಿ ನಾಯಕರಿಗೆ ದೊಡ್ಡ ಸಂಪನ್ಮೂಲಗಳಿವೆ. ಆದರೆ, ಚುನಾವಣೆಯಲ್ಲಿ ಗೆಲ್ಲಲು ಅದು ಸಾಕಾಗುವುದಿಲ್ಲ” ಎಂದು ತಿಳಿಸಿದ್ದಾರೆ.
null
ಇನ್ನೂ ಟಿಎಂಸಿ ಗೆಲುವನ್ನು ವ್ಯಾಖ್ಯಾನಿಸಿರುವ ಪ್ರಶಾಂತ್ ಕಿಶೋರ್, “ಟಿಎಂಸಿ ಏಕೆ ಇಷ್ಟು ದೊಡ್ಡದಾಗಿ ಗೆದ್ದಿದೆ ಎಂದು ಹೇಳುವುದು ತುಂಬಾ ಕಷ್ಟ. ಆದರೆ, ಬಂಗಾಳದ ಜನ ಮಮತಾ ಬ್ಯಾನರ್ಜಿ ಅವರನ್ನು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸಿದ್ದಾರೆ. ಅದಕ್ಕೆ ಬಿಜೆಪಿ ಕೇಂದ್ರ ಸರ್ಕಾರದ ವೈಫಲ್ಯವೂ ಕಾರಣವಾಗಿರಬಹುದು.
ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯದಲ್ಲಿ ಗೆಲುವು ಸಾಧಿಸಲು ನೀವು ಹೊರಗಿನ ಅಂಶದೊಂದಿಗೆ ಚರ್ಚೆ ನಡೆಸುತ್ತಾ ಚುನಾವಣೆ ನಡೆಸಿದರೆ ಯಾವುದೇ ಉಪಯೋಗವಿಲ್ಲ. ಬದಲಿಗೆ ಪಶ್ಚಿಮ ಬಂಗಾಳದಲ್ಲೇ ಸಾಕಷ್ಟು ವಿಚಾರಗಳಿವೆ. ಅವನ್ನು ಮುಂದಿಟ್ಟು ಚುನಾವಣೆ ಎದುರಿಸುವುದೇ ಸೂಕ್ತ. ಆದರೆ, ಬಿಜೆಪಿ ಹಳೆಯ ವಿಚಾರಗಳನ್ನೇ ಜನರ ಮುಂದಿಟ್ಟಿದ್ದು ಇಂತಹ ಹೀನಾಯ ಸೋಲಿಗೆ ಕಾರಣ” ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
null
“ಅಸಲಿಗೆ ಬಿಜೆಪಿ 2019ರಿಂದಲೇ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಪ್ರಚಾರ ನಡೆಸುತ್ತಿದೆ. ಆದರೆ, 2021ರಲ್ಲೂ ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಬದಲಿಸದೆ ಅದೇ ತಂತ್ರವನ್ನು ಪುನರಾವರ್ತಿಸಿರುವುದು ಬಿಜೆಪಿ ಸೋಲಿಗೆ ಪ್ರಮುಖ ಕಾರಣ. ಆದರೆ, ಟಿಎಂಸಿ ಪಾಲಿಗೆ ಬಂಗಾಳದ ನಿರೂಪಣೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.
ಅಲ್ಲದೆ, ಈ ಚುನಾವಣೆ ದೀದಿ ಮತ್ತು ಮೋದಿ ನಡುವಿನ ಸಮರ ಎಂದೇ ಬಿಂಬಿತವಾಗಿತ್ತು. ಹೀಗಾಗಿ ಇಲ್ಲಿ ಯಾವ ನಾಯಕನಿಗೂ ಮಹತ್ವವೇ ಇರಲಿಲ್ಲ. ಕೊನೆಗೆ ಬಂಗಾಳದ ಜನ ದೀದಿಯನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಮ್ಮ ಯಾವ ನಡೆಯನ್ನು ಜನ ಮೆಚ್ಚಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಅವರ ಮತಗಳಿಗೆ ನಾವು ನ್ಯಾಯ ಕಲ್ಪಿಸುವ ಕೆಲಸವನ್ನು ಮಾಡಬೇಕಾಗಿದೆ” ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
null
ಪ್ರಶಾಂತ್ ಕಿಶೋರ್ ಚುನಾವಣಾ ತಜ್ಞ ಎಂದೇ ಖ್ಯಾತ ನಾಮರಾಗಿದ್ದು, 2014ರಲ್ಲಿ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಕೂರಿಸುವಲ್ಲಿ ಶ್ರಮ ವಹಿಸಿದ್ದರು. ಆದರೆ, ತದನಂತರ ಬಿಜೆಪಿಯಿಂದ ದೂರವಾದ ಪ್ರಶಾಂತ್ ಕಿಶೋರ್ ಇದೀಗ ಬಿಜೆಪಿ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪರವಾಗಿ ಚುನಾವಣಾ ತಂತ್ರ ಹೆಣೆದಿದ್ದ ಪ್ರಶಾಂತ್ ಕಿಶೋರ್ ಕಳೆದ ನವೆಂಬರ್ ತಿಂಗಳಲ್ಲೇ, “ಬಿಜೆಪಿ ಏನೇ ಮಾಡಿದರು ಬಂಗಾಳದಲ್ಲಿ ಮೂರಂಕಿ ದಾಟಲು ಸಾಧ್ಯವಿಲ್ಲ. ಒಂದು ವೇಳೆ ಬಿಜೆಪಿ ಗೆದ್ದರೆ ನಾನು ರಾಜಕೀಯವಾಗಿ ನಿವೃತ್ತಿ ಪಡೆಯುತ್ತೇನೆ” ಎಂದು ಸವಾಲು ಹಾಕಿದ್ದರು.
ಇಂದು ಫಲಿತಾಂಶ ಹೊರಬಿದ್ದಿದ್ದು, ಪ್ರಶಾಂತ್ ಕಿಶೋರ್ ಮಾತಿನಂತೆ ಬಿಜೆಪಿ ಮೂರಂಕಿ ಸಹ ದಾಟಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಶಾಂತ್ ಕಿಶೋರ್ ಅವರ ಸವಾಲು ರಾಷ್ಟ್ರೀಯ ಮಟ್ಟದಲ್ಲಿ ಇಂದು ವೈರಲ್ ಆಗುತ್ತಿದೆ. ಇದೇ ವೇಳೆ ತಮಿಳುನಾಡಿನಲ್ಲಿ ಡಿಎಂಕೆ ಪರವಾಗಿಯೂ ಪ್ರಶಾಂತ್ ಕಿಶೋರ್ ಕೆಲಸ ಮಾಡಿದ್ದರು ಎಂಬುದು ಉಲ್ಲೇಖಾರ್ಹ