ಬೆಂಗಳೂರು, ಜು.8- ಇನ್ನು ಮುಂದೆ ಪೊಲೀಸರ ತಪಾಸಣೆಯ ವೇಳೆ ವಾಹನ ಸವಾರರು ಡಿಜಿಟಲ್ ದಾಖಲೆಗಳನ್ನೇ ಪ್ರದರ್ಶನ ಮಾಡಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ. ಡಿಜಿಟಲ್ ಕ್ರಾಂತಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು , ಬೆಂಗಳೂರು ನಗರ ಪೊಲೀಸ್ ವಿಭಾಗವು ಡಿಜಿಟಿಲೀಕರಣದ ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ಅಗತ್ಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗುತ್ತಿರುವ ಕಿರಿಕಿರಿಯಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ರೂಪದ ದಾಖಲೆಗಳನ್ನು ಹಾಜರುಪಡಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಇನ್ನು ಮುಂದೆ ಚಾಲನಾ ಪರವಾನಿಗೆ , ನೋಂದಣಿ ಪ್ರಮಾಣ ಪತ್ರ, ವಿಮೆ, ಫಿಟ್‍ನೆಸ್ ಪ್ರಮಾಣ ಪತ್ರ , ಪರ್ಮಿಟ್ , ವಾಯುಮಾಲಿನ್ಯ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಲೆಕ್ಟ್ರಾನಿಕ್ ಮಾದರಿಯಲ್ಲಿ ಸಲ್ಲಿಸಬಹುದು..