ದೇವೇಗೌಡರ ಮಗ ಅನ್ನೋದು ಬಿಟ್ಟರೆ ಅವರಿಗೆ ಇನ್ಯಾವ ಅರ್ಹತೆಯಿದೆ
ಹಾಸನ: ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಬಾರದು ಅಂತ ಹೇಳಲು ರೇವಣ್ಣ ಯಾರು? Who is he.!? ಹಾಸನ ವಿಧಾನಸಭಾ ಕ್ಷೇತ್ರಕ್ಕೂ ರೇವಣ್ಣನಿಗೂ ಏನು ಸಂಬಂಧ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಕಿಡಿಕಾರಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲದಿನದಿಂದ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ನಡುವಿನ ವಾಕ್ಸಮರ ಮುಂದುವರಿಸಿದ್ದು, ರೇವಣ್ಣ ಅವರ ವಿರುದ್ಧ ಪ್ರೀತಂ ಇಂದು ಹಿಗ್ಗಾಮುಗ್ಗ ವಾಗ್ಧಾಳಿ ನಡೆಸಿದರು. ಎಲ್ಲವನ್ನು ಪರಿಶೀಲನೆ ಮಾಡಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಜೆಡಿಎಸ್ ಅವರು ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯವನ್ನು ಬೆರೆಸುತ್ತಿದ್ದಾರೆ. ನಾನು ಯಾವುದಕ್ಕೂ ಜಗ್ಗುವುದಿಲ್ಲ. ಕುಗ್ಗುವುದು ಇಲ್ಲ ಎಂದು ಭರವಸೆ
ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ
ನಾನು ಇಂದೇ ಹೇಳುತ್ತೇನೆ ಬರೆದಿಟ್ಟುಕೊಳ್ಳಿ. ನನ್ನ ವಿರುದ್ಧ ರೇವಣ್ಣ ನಿಂತರೆ ನಾನು 50,000 ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. 50 ಸಾವಿರಕ್ಕಿಂತ ಒಂದು ಮತ ಕಡಿಮೆ ಬಂದರು ಅಂದೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರೀ ಎಲೆಕ್ಷನ್‍ಗೆ ಹೋಗುತ್ತೇನೆ ಎಂದು ಸವಾಲು ಹಾಕಿದರು.
ತಾಕತ್ತಿದ್ದರೆ ನೀವು ಘೋಷಣೆ ಮಾಡಿ, ಪ್ರೀತಮ್ ಗೌಡ ವಿರುದ್ಧ ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ಸವಾಲೆಸೆದ ಪ್ರೀತಂ, ಹಾಸನದಲ್ಲಿ ಬಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಅವರಿಗೆ ಇಲ್ಲ. ಆದ್ದರಿಂದ ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಭಿವೃದ್ಧಿಗೆ ತೊಡಕು ಉಂಟುಮಾಡುತ್ತಿದ್ದಾರೆ. ನಾನು ದಾರಿಯಲ್ಲಿ ಹೋಗುವ ದಾಸಯ್ಯ ಅಲ್ಲ. ರೇವಣ್ಣ ಅವರು ಮಕ್ಕಳಂತೆ ಮಾತನಾಡುವುದನ್ನು ಬಿಟ್ಟು ಅವರ ಹುದ್ದೆಗೆ ಗಂಭೀರವಾಗಿ ನಡೆದುಕೊಳ್ಳಬೇಕು. ಡಿಸಿ ಆಫೀಸಿನಲ್ಲಿ ಅಧಿಕಾರಿಗಳನ್ನು ಬಯ್ಯುವ ಇವರು ನಂತರ ಕ್ಷಮೆ ಕೇಳುತ್ತಾರೆ. ಇಂತಹ ವರ್ತನೆ ಅವರದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೇವಣ್ಣ 2023ಕ್ಕೆ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಮೊದಲು ಅಸಲು ಎಲ್ಲಿದೆ ಅಂತ ಹುಡುಕಲು ಹೇಳಿ ಎಂದು ಟೀಕಿಸಿದ ಪ್ರೀತಂ, ಹಾಸನದಲ್ಲಿ ಚುನಾವಣೆಗೆ ನಿಂತು ಎರಡನೇ ಸ್ಥಾನ ಇರಲಿ, ಮೂರನೇ ಸ್ಥಾನಕ್ಕೆ ಹೋಗುತ್ತಾರೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಮೆಂಬರ್‌ಗಳು ಇವರಿಗಿಂತ ಚೆನ್ನಾಗಿ ನಡೆದುಕೊಳ್ಳುತ್ತಾರೆ. ಏಳನೇ 10ನೇ ತರಗತಿ ಓದಿರೋರು.. ಇದೇ ತರ ಆಡುವುದು. ವಿದ್ಯಾಭ್ಯಾಸ ಮಾಡುವುದರಲ್ಲಿ ಎಂತಹ ಕಷ್ಟ ಇದೆ ಅಂತ ಗೊತ್ತಿರುವುದಿಲ್ಲ. ಅದಕ್ಕೆ ಅಧಿಕಾರಿಗಳೊಂದಿಗೆ ಇಂತಹ ವರ್ತನೆ ಮಾಡುತ್ತಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರು ಹೇಳಿ ರಾಜಕಾರಣ ಮಾಡುವವರು, ಗಾಳಿಯಲ್ಲಿ ಗುಂಡು ಹೊಡೆಯುವವರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೂ ಒಂದು ಶಕ್ತಿ ಇದೆ ರಾಷ್ಟ್ರೀಯ ಪಕ್ಷದಿಂದ ಶಾಸಕನಾಗಿದ್ದೇನೆ ಎಂದರು.
ರೇವಣ್ಣ ನನಗೆ ಯಾವ ಲೆಕ್ಕ?
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಕಾರ್ಯಕರ್ತರು ಎಲ್ಲಿದ್ದಾರೆ. ಅವರು ಬಹಳ ಹತಾಶರಾಗಿದ್ದಾರೆ. ಇರುವವರನ್ನು ಕಾಪಾಡಿಕೊಂಡು ಹೋಗುವುದು ನಿಮಗೆ ಒಳ್ಳೆಯದು ಎಂದು ಸಲಹೆ ಕೊಟ್ಟರು. ಮುಂದಿನ ದಿನಗಳಲ್ಲಿ ಅಸಲು ಬಡ್ಡಿ ಇಲ್ಲದಂತೆ ಖಾಲಿ ಮಾಡಬೇಕಾಗುತ್ತದೆ. ಈ ಹೇಳಿಕೆ ಹಿಟ್ಲರ್, ನಡಾಫ್ ಎಲ್ಲ ಕಳೆದು ಹೋಗಿದ್ದಾರೆ. ನನಗೆ ರೇವಣ್ಣ ಯಾವ ಲೆಕ್ಕ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರೀತಮ್ ಗೌಡ ಕೆ.ಆರ್.ಪೇಟೆ , ಶಿರಾದಲ್ಲಿ ಅವರೇ ಉಸ್ತುವಾರಿ ಏನಾಯ್ತು. ಹಾಸನಕ್ಕೆ ಬಂದರೂ ಇದೇ ಕಥೆಯಾಗುತ್ತದೆ. ಬುಟ್ಟೀಲಿ ಹಾವಿದೆ ಅಂತಾರೆ ಅದರಲ್ಲಿ ಹಾವ್ರಾಣಿನೂ ಇರುವುದಿಲ್ಲ ಎಂದು ಲೇವಡಿ ಮಾಡಿದರು.
ಕಾಲೇಜಿಗೆ ಹೋಗುವ ಹುಡುಗ ಮಾತನಾಡಿದರೆ ಉತ್ತರ ಕೊಡ್ತೀನಿ. ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿ ಇಲ್ಲದಂತೆ ಮಾತನಾಡುತ್ತಿರುವವರಿಗೆ ಉತ್ತರ ನೀಡಲು ಸಾಧ್ಯವಿಲ್ಲ. ದೇವೇಗೌಡರ ಮಗ ಅನ್ನೋದು ಬಿಟ್ಟರೆ ಅವರಿಗೆ ಇನ್ಯಾವ ಅರ್ಹತೆಯಿದೆ. ಏಳು, 10ನೇ ತರಗತಿ ಪಾಸಾದವರಿಗೆ ಗೌರವದಿಂದ ನಡೆದುಕೊಳ್ಳಲು ಎಲ್ಲಿ ಬರುತ್ತೆ. ನಾನು ಅವನಲ್ಲ ದೇವರ ದಯೆಯಿಂದ ಡಬಲ್ ಡಿಗ್ರಿ ಪಡೆದಿದ್ದೇನೆ. ಇನ್ನಾದರೂ ರೇವಣ್ಣ ಅವರು ಗೌರವದಿಂದ ಇರಲಿ ಎಂದು ಖಾರವಾಗಿ ನುಡಿದರು.
ಮ್ಯೂಸಿಯಂಗಾಗಿ ಜಾಗದಲ್ಲಿ ಕಲ್ಯಾಣ ಮಂಟಪ
ಜೆಡಿಎಸ್‍ನ ಮಾಜಿ ಸಚಿವರು ಮ್ಯೂಸಿಯಂ ಮಾಡ್ತೀವಿ ಎಂದು ಹೇಳಿ ಹುಡಾದಿಂದ ಜಾಗ ತೆಗೆದುಕೊಂಡಿದ್ದಾರೆ. ನಂತರ ಅಲ್ಲಿ ಎರಡು ಕಲ್ಯಾಣ ಮಂಟಪ ಕಟ್ಟಿ ತಿಂಗಳಿಗೆ 50 ಲಕ್ಷ ರೂ. ದುಡಿಮೆ ಮಾಡುತ್ತಿದ್ದಾರೆ. ಆದರೆ ಇದೀಗ ನನ್ನ ಅಭಿವೃದ್ಧಿ ಕೆಲಸಕ್ಕೆ ವಿರೋಧ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದ ಪ್ರೀತಂ, ಗಾಜಿನಮನೆಯಲ್ಲಿ ಕೂತಿದ್ದೀರಾ ಸಮಾಧಾನವಾಗಿ ಇದ್ರೆ ಒಳ್ಳೆಯದು ಇಲ್ಲ ಎಂದರೆ ಎಲ್ಲ ಹಗರಣಗಳನ್ನು ಬಿಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ
ರೇವಣ್ಣ ಅವರೇನು ಸ್ವಾಮಿ ವಿವೇಕಾನಂದ ಅಲ್ಲ
ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಿದರೆ ದೊಡ್ಡಹಳ್ಳಿ ರೀತಿ ಗೋಲಿಬಾರ್ ಆಗುತ್ತೆ ಎಂಬ ರೇವಣ್ಣ ಹೇಳಿಕೆ ವಿರುದ್ಧ ಮಾತನಾಡಿದ ಅವರು, ಆಟ 1978ರಲ್ಲಿ ಮುಗಿದು ಹೋಗಿದೆ. ಅವರು ಕರೆದೊಡನೆ ಯುವಕರು ಬರಲು ರೇವಣ್ಣ, ಸ್ವಾಮಿ ವಿವೇಕಾನಂದ ಅಲ್ಲ. ಅವರು ಅಕ್ರಮ ಮಾಡಿರುವ ಎಲ್ಲ ದಾಖಲೆಗಳು ಇದೆ ಎಂದು ತಿಳಿಸಿದರು.
ನಾನು ಹೊಳೆ ನರಸೀಪುರದ ವಿಚಾರಕ್ಕೆ ಹೋದರೆ ಮುನಿಸಿಪಾಲಿಟಿಯಲ್ಲಿ ಏನು ಮಾಡಿದ್ದಾರೆ. ಯಾರ ಹೆಸರಿಗೆ ಡಿಡಿ ತೆಗೆದಿದ್ದಾರೆ ಗೊತ್ತಿದೆ. ಅವರ ಸ್ವಂತಕ್ಕಾಗಿ ಏನೇನು ಮಾಡಿಕೊಂಡಿದ್ದಾರೆ ಅಂತ ಕಥೆ ತೆಗೆದರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರಿಗೆ ಸಮಯ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.