ಬೆಳಗಾವಿ ಜಿಲ್ಲೆ ಹಲಸಿ ಗ್ರಾಮದಲ್ಲಿ ಕನ್ನಡ ದ್ವಜಸ್ಥಂಭಕ್ಕೆ ಕಟ್ಟಿದ್ದ ಕನ್ನಡ ದ್ವಜಕ್ಕೆ ಕಂಬದಲ್ಲೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ನಡೆದಿದೆ. ಜೊತೆಗೆ ವಿಶ್ವ ಮಾನವ ಜಗಜ್ಯೋತಿ ಬಸವಣ್ಣನವರ ಪ್ರತಿಮೆಗೆ ಸಗಣಿ ಬಳಿದು ಅವಮಾನಿಸಲಾಗಿದೆ. ಇದು ಎಂ ಇ ಎಸ್ ನವರ ಅತ್ಯಂತ ನೀಚ ಮತ್ತು ಉದ್ದಟತನದ ಪರಮಾವಧಿಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಕಿಡಿ ಕಾರಿದ್ದಾರೆ.
ಕನ್ನಡದ ಬಾವುಟ ಸುಡುವುದು, ಕನ್ನಡಿಗರ ಮನೆ ವಾಹನಗಳ ಮೇಲೆ ಕಲ್ಲು ತೂರುವುದು, ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವುದು ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ದೇಶಭಕ್ತನನ್ನು ಅವಮಾನಿಸುವುದು, ಮತ್ತೀಗ ದೇಶ ಭಾಷೆ ಜಾತಿ ಧರ್ಮಗಳನ್ನೂ ಮೀರಿದ ಸಮಾನತಾವಾದದ ಹರಿಕಾರ ಬಸವಣ್ಣನವರನ್ನು ಅವಮಾನಿಸುವ ಮಟ್ಟಕೆ ಇಳಿದಿರುವ ಎಂ ಇ ಎಸ್ ನವರನ್ನು ಮಟ್ಟ ಹಾಕದಿದ್ದರೇ ಈ ಸರ್ಕಾರ ಸತ್ತು ಹೋಗಿದೆ ಎಂದೇ ಭಾವಿಸಬೇಕಾಗಿದೆ.
ರಾಜ್ಯದಲ್ಲಿ ಎಂ ಇ ಎಸ್ ಮತ್ತು ಶಿವಸೇನೆಯ ಪುಂಡಾಟಿಕೆ ಕಡಿವಾಣ ಹಾಕಲು ಒತ್ತಡಗಳು ಹೆಚ್ಚಾಗುತ್ತಿದ್ದರೂ ಕಿವಿ ಕೇಳಿಸದಂತಿರುವ BJP ಸರ್ಕಾರ ಎಂ ಇ ಎಸ್ ಅನ್ನು ಓಲೈಸುವ ಕೆಲಸ ಮಾಡುತ್ತಿದೆ ಮತ್ತು ಹಲವು BJP ಮುಖಂಡರು ಎಂ ಇ ಎಸ್ ಅನ್ನು ಸಮರ್ಥಿಸುವಂತಹ ಹೇಳಿಕೆಗಳುನ್ನು ನೀಡುತ್ತಿರುವುದು ಅಕ್ಷಮ್ಯ ಮತ್ತು ಅಪರಾಧವಾಗಿರುತ್ತದೆ.
ರಾಜ್ಯ BJP ಸರ್ಕಾರ ಕೂಡಲೇ ಎಂ ಇ ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಏನು ಕೆಲಸ ಎನ್ನುವುದನ್ನು ಸ್ಪಷ್ಟಪಡಿಸಬೇಕು.
ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿರುವ ದುಷ್ಟರನ್ನು ಕೂಡಲೇ ಪತ್ತೆ ಹಚ್ಚಿ ಅವರನ್ನು ಗಡಿಪಾರು ಮಾಡಬೇಕು.
ದಾಳಿಗೆ ಒಳಗಾಗಿ ನಷ್ಟ ಅನುಭವಿಸಿರುವ ಎಲ್ಲ ಕನ್ಬಡಿಗರಿಗೂ ಕೂಡಲೇ ನಷ್ಟ ಪರಿಹಾರ ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರು ತಮ್ಮಪತ್ರಿಕಾ ಹೇಳಿಕೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.